Sampoorna Shiva mahatme yakshagana at Mysore Jan 17 2015

ಸಂಪೂರ್ಣ ಶಿವ ಮಹಾತ್ಮೆ
ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಸುತ್ತೂರು ಎಂಬ ಪುಟ್ಟ ಗ್ರಾಮವು ಕಪಿಲಾ ಹೊಳೆಯ ದಂಡೆಯಲ್ಲಿದೆ. ಸುಮಾರು ೧೦೦೦ ವರ್ಷಗಳ ಹಿಂದೆ ಶಿವಾಂಶಭೂತರಾದ ಜಗದ್ಗುರು ಶ್ರೀ ಶಿವರಾತ್ರೀಶ್ವರ ಭಗವದ್ಪಾದರು ಸಮಾಜದ ಏಳಿಗೆಗೆ , ಆಧ್ಯಾತ್ಮ ಸಾಧನೆಗೆ ಮಠವೊಂದನ್ನು ಸ್ಥಾಪಿಸಿದರು. ವಿದ್ಯೆ, ದಾಸೋಹ, ಅಭಯದಾನ, ಆರೋಗ್ಯಸೇವೆ ,ಜಾನಪದ ಕಲೆಗಳಿಗೆ ಪ್ರೋತ್ಸಾಹ,  ಸಾಂಸ್ಕೃತಿಕ, ಧಾರ್ಮಿಕ ಕಾರ್ಯಗಳಿಗೆ ನಿರ್ದೇಶನ ಹೀಗೆ ಹತ್ತು ಹಲವು ಸಮಾಜಮಖಿ ಯೋಜನೆಗಳನ್ನು ಹಾಕಿಕೊಂಡು ಪರಿಣಾಮಕಾರಿ ಯಾಗಿ ಅನುಷ್ಠಾನಗೊಳಿಸಿದ್ದರ ಪರಿಣಾಮ ಇಂದು ೩೫೦ ಕ್ಕೂ ಹೆಚ್ಚಿನ ವಿದ್ಯಾಸಂಸ್ಥೆ , ಆಸ್ಪತ್ರೆ ಇತ್ಯಾದಿ ಕೇಂದ್ರಗಳನ್ನು ಸ್ಥಾಪಿಸಿ ನಡೆಸಲಾಗುತ್ತಿದೆ. ಭಾರತದ ಹೊರಗೂ ಶ್ರೀ ಮಠದ ಕೇಂದ್ರಗಳಿರುವುದು ಹೆಮ್ಮೆಯ ವಿಚಾರ.  ಲಕ್ಷಾಂತರ ಮಂದಿಗೆ ಉದ್ಯೋಗ, ಕೋಟಿ ಸಂಖ್ಯೆಗೂ ಮಿಗಿಲು ವಿದ್ಯೆ ಇತ್ಯಾದಿಗಳ ಸೇವೆ ಪಡೆದವರ ಬಳಗ ವರ್ಷಕ್ಕೊಮ್ಮೆ ತಪ್ಪದೇ ಸೇರುವುದು ಆರು ದಿನಗಳ ಜಾತ್ರಾ ಮಹೋತ್ಸವಕ್ಕೆ. ಈ ಸಲದ ಜಾತ್ರಾ ಮಹೋತ್ಸವ ಸುತ್ತೂರು ಶ್ರೀ ಕ್ಷೇತ್ರದಲ್ಲಿ ೧೭ ಜನವರಿ ೨೦೧೫ ಶನಿವಾರ ದಿಂದ ೨೨ ನೇ ಜನವರಿ ೨೦೧೫ ಗುರುವಾರದ ವರೆಗೆ ನಡೆಯುವುದು.  ಕೃಷಿ ಮೇಳ, ವಿಜ್ಞಾನ ಮೇಳ, ದನಗಳ ಜಾತ್ರೆ, ಸಾಮೂಹಿಕ ಮದುವೆ, ನಾಡಕುಸ್ತಿ, ನಾಟಕದ ೩ ರಂಗಸ್ಥಳಗಳಲ್ಲಿ ಪ್ರತಿದಿನ ರಾತ್ರಿಯಿಡೀ ಒಟ್ಟು ೧೫ ಪೌರಾಣಿಕ ನಾಟಕಗಳ ಪ್ರದರ್ಶನ, ಬಂದವರಿಗೆಲ್ಲಾ ಎರಡು ಹೊತ್ತಿನ ದಾಸೋಹ ಸೇವೆ,  ದೇಶದ ವಿವಿಧ ಕಲೆಗಳ ಪ್ರದರ್ಶನ,  ಅನೇಕಾನೇಕ ಗಣ್ಯವ್ಯಕ್ತಿಗಳನ್ನು ಕರೆಸಿ ಭಾಷಣ ಇತ್ಯಾದಿ ವ್ಯವಸ್ಥಿತ ಕಾರ್ಯಕ್ರಮ ಗಳು ನಡೆಯಲಿವೆ. ಇವುಗಳಿಗೆಲ್ಲಾ ಕಳಶಪ್ರಾಯದಂತೆ ಜಾತ್ರೆಯ ಆರಂಭದ ದಿನ ೧೭-೧-೨೦೧೫ ಶನಿವಾರ ಗದ್ದಿಗೆ ಮುಂಭಾಗದ ಮುಖ್ಯವೇದಿಕೆಯಲ್ಲಿ ಎಡನೀರಿನ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಮಂಡಳಿಯ ಪ್ರಸಿದ್ಧ ಕಲಾವಿದರಿಂದ ಪರಂಪರೆಯ ಯಕ್ಷಗಾನ ಬಯಲಾಟ ಪ್ರದರ್ಶನ ರಾತ್ರಿ ೮ ಗಂಟೆಯಿಂದ ಸೂರ್ಯೋದಯದವರೆಗೆ. ಪ್ರಸಂಗ : ಸಂಪೂರ್ಣ ಶಿವ ಮಹಾತ್ಮೆ. ೧೮೨೩- ೭೪ ರಲ್ಲಿ ಲಿಂಗರಾಜ-ದೇವಾಂಬಿಕೆ ಯ ಮಗ, ಗುರು ರೇಣುಕಾಚಾರ್ಯ ವಂಶೋದ್ಭವ ಚನುವೀರದೇಶಿಕನು ಮುಮ್ಮಡಿ ಕೃಷ್ಣರಾಜನ(ಕ್ರಿ.ಶ.೧೭೯೯-೧೮೬೮) ಅಳಿಯನಾಗಿದ್ದರಿಂದ ಅಳಿಯ ಲಿಂಗರಾಜ ನೆಂದೇ ಪ್ರಖ್ಯಾತಿ ಹೊಂದಿದ್ದು ೪೭ ಕ್ಕಿಂತಲೂ ಅಧಿಕ ಯಕ್ಷಗಾನ ಕಾವ್ಯಗಳನ್ನು ರಚಿಸಿದ್ದಾನೆ.  ಇದರಲ್ಲಿ ಶಿವನ ಪಂಚವಿಂಶತಿ ಲೀಲೆಗಳು ಬಹುಪ್ರಸಿದ್ಧವಾಗಿದ್ದು ಇದನ್ನು ರಂಗಪ್ರದರ್ಶನಕ್ಕೆ ಭಾಗವತ ಹೊಸಮೂಲೆ ಗಣೇಶ ಭಟ್ಟರು ಎಂಬ ಪ್ರಸಂಗವನ್ನು ರಚಿಸಿರುತ್ತಾರೆ. ಶಿವನ ೨೫ ಲೀಲೆಗಳನ್ನು ಸುಮಾರು ೬೦ ವೇಷಗಳು ೬೦ ವೇಷಗಳು ರಾತ್ರಿಯಿಡೀ ಕುಣಿದು - ಅರ್ಥೈಸಿ ಜಾತ್ರೆಗೆ ಸೇರಿದ ಲಕ್ಷಾಂತರ ಯಕ್ಷಗಾನ ನಡೆಯನ್ನು ಅರಿಯದ ಪ್ರೇಕ್ಷಕರಿಗೆ ತಲುಪಿಸಲಿದ್ದಾರೆ. ಮೈಸೂರಿನ ಸುಪ್ರಸಿದ್ಧ ವೈದ್ಯರಾದ ಬೆಳ್ಳಿಪ್ಪಾಡಿ ಡಾ.ಸತೀಶ ರೈಗಳು ಈ ಕಾರ್ಯಕ್ರಮದ ಸಂಪೂರ್ಣ ನಿರ್ದೇಶಕರಾಗಿಯೂ ಮೈಸೂರಿನ ಅನಂತವರ್ಧನ ಅವರು ಸಂಯೋಜಕರಾಗಿಯೂ ಈ ಮೊದಲ ಪ್ರದರ್ಶನದ ಜವಾಬ್ದಾರಿಯನ್ನು ನಿರ್ವಹಿಸಲಿದ್ದಾರೆ. ಸುಪ್ರಸಿದ್ಧ ಭಾಗವತರಾದ ಶ್ರೀ ದಿನೇಶ ಅಮ್ಮಣ್ಣಾಯ ಮತ್ತು ಹೊಸಮೂಲೆ ಗಣೇಶ ಭಟ್ ಮುಂಛೂಣಿಯಲ್ಲಿದ್ದು ಪ್ರಸಂಗದ ಮಹಾಪೋಷಕರೂ,  ನಿರ್ವಾಹಕರೂ ಆಗಿರುತ್ತಾರೆ. ಪರಮಪೂಜ್ಯ ಜಗದ್ಗುರುಗಳಾದ ಎಡನೀರು ಮಠದ ಶ್ರೀ ಕೇಶವಾನಂದ ಭಾರತೀ ಮಹಾಸ್ವಾಮಿಗಳು ಹಾಗೂ ವೀರಸಿಂಹಾಸನ ಮಠ, ಸುತ್ತೂರು ಸಂಸ್ಥಾನ ಶ್ರೀ ಶಿವರಾತ್ರಿ ದೇಶೀಕೇಂದ್ರ ಮಹಾಸ್ವಾಮಿಗಳವರ ಪೂರ್ಣಾನುಗ್ರಹವೂ ಆಶೀರ್ವಾದವೂ ಇರುತ್ತದೆ. ಯಕ್ಷಗಾನ ಕಲಾಭಿಮಾನಿಗಳನ್ನೆಲ್ಲಾ ಸುತ್ತೂರು ಮಹಾಸಂಸ್ಥಾನವು ಕೈಬೀಸಿ ಕರೆಯುತ್ತಿದೆ. ಶರಣು ಬನ್ನಿ.
                            ಡಾ.ಬಿ.ಸತೀಶ್ ರೈ
                          ೯೩೪೨೧೫೪೩೨೬
                     ಜಿ.ಎನ್.ಅನಂತವರ್ಧನ
                       ೯೪೪೯೨೬೪೯೨೦

Post a Comment

Previous Post Next Post