Thursday, January 7, 2016

"ಪುರುಷಾಮೃಗ ಪ್ರಸಂಗ"

"ಪುರುಷಾಮೃಗ ಪ್ರಸಂಗ"
--------------------------
ಮೊನ್ನೆ ಬೆಂಗಳೂರಿನಿಂದ ಊರಿಗೆ ಹೋದವ ಹೇಗಾದ್ರೂ ಮಾಡಿ ಆಟಕ್ಕೆ ಹೋಗ್ಬೇಕು ಅಂತ ನಿರ್ಧಾರ ಮಾಡಿ ಕಟೀಲು ಮೇಳದ ಆಟ ಎಲ್ಲಿದೆ ಹುಡುಕಿ ಉಪ್ಪಿನಂಗಡಿಯ ಮೂಲೆಯೊಂದರಿಂದ ಸಂಜೆ ಐದಕ್ಕೆ ಹೊರಟು, ರಾತ್ರಿ ಒಂಭತ್ತು ಒಂಭತ್ತೂವರೆಯ ಹೊತ್ತಿಗೆ ಕಟೀಲಿಗೆ ತಲುಪಿದೆ ಆದಿವಸ ಶುಕ್ರವಾರ ಜನವರಿ ಒಂದನೇ ತಾರೀಕು ಎರಡೆರಡು ಮೇಳಗಳ ಆಟ ಒಂದೇ ಕಡೆ. ಇವತ್ತು ಅಲ್ಲಿಗೆ ಒಮ್ಮೆ ಹೋಗುವುದು ಇಲ್ಲಿಗೆ ಒಮ್ಮೆ ಹಾಗೇ ಆಟ ನೋಡ್ಬೇಕಷ್ಟೆ ಅಂದುಕೊಂಡೆ. ಆದರೆ ಅಂಡಾಲರು ಕುಳಿತಿರುವವರೆಗೆ ಇಲ್ಲಿಯೇ ಕುಳಿತಿರಬೇಕು ಎನ್ನುವ ಶಪಥ ಹಾಕಿ ಬಂದಿದ್ದೆ, ನಮ್ಮ ಅಂಡಾಲರು ಹೇಗೆ ಆಟ ಆಡಿಸ್ತಾರೆ ನೋಡ್ಲೇಬೇಕು ಅಂದುಕೊಂಡಿದ್ದೆ.

Photo: Sudhakar Jain

ಆವತ್ತಿನ ಪ್ರಸಂಗ ಗಜೇಂದ್ರ ಮೋಕ್ಷ, ಪುರುಷಾಮೃಗ ಮತ್ತು ರತಿಕಲ್ಯಾಣ. ಪೂರ್ತಿ ರಾತ್ರೆಗೆ ಆದ ಕಾರಣ ಮೂರು ಪ್ರಸಂಗಗಳನ್ನು ಆಡಿಸಿದ್ದು ಎಲ್ಲಿಯೂ ಗಡಿಬಿಡಿ ಮಾಡದೇ ಪ್ರತೀ ಪ್ರಸಂಗವೂ ಚಂದವಾಯ್ತು.
ಸರಿ ಸುಮಾರು ಹನ್ನೆರಡೂ ವರೆಗೆ ತಿಳಿನೀಲಿಯ ಜುಬ್ಬಾ ತೊಟ್ಟಿದ್ದ ಹಣೆಗೆ ಗೌರವದ ತಿಲಕ ಇಟ್ಟಿದ್ದ ಕೆಂಪು ಮುಂಡಾಸು ತೊಟ್ಟಿದ್ದ ಅಂಡಾಲ ದೇವಿಪ್ರಸಾದ "ಭಾಗವತರ" ಪ್ರವೇಶವಾಯ್ತು, ಅವರು ಬಂದು ಕುಳಿತ ಠೀವಿಯೇ ಚಂದ ಅಲ್ಲಿಂದ ಮುಂದೆ ಮೂರೂ ಕಾಲರ ವರೆಗೆ, ಪುರುಷಾಮೃಗ ಪ್ರಸಂಗದ ಕೊನೆಯಾಗುವಲ್ಲಿಯವರೆಗೆ ಎಲ್ಲಿಯೂ ಪ್ರಸಂಗ ಸಿಕ್ಕಿ ಹಾಕಿಕೊಳ್ಳದಂತೆ, ಸಭಿಕರ ಚಿತ್ತ ಅತ್ತಿತ್ತ ಚಲಿಸದಂತೆ ಚೆನ್ನಾಗಿ ಆಟ ಆಡಿಸಿದ್ರು. ಪರಂಪರೆಯ ಕ್ರಮದಲ್ಲೇ ಭೀಮ ಪುರುಷಾಮೃಗವನ್ನು ತರುವ ಸನ್ನಿವೇಶ ಎರಡು ಮೂರು ಬಾರಿ ಹನೂಮಂತನ ರೋಮವನ್ನುದುರಿಸಿ ಅಲ್ಲಿ ಶಿವಲಿಂಗ ಪ್ರತ್ಯಕ್ಷವಾಗುವಾಗ ಪೂಜೆ ಮಾಡುವ ಸನ್ನಿವೇಷಗಳು ಅಲ್ಲಿನ ಪದ್ಯಗಳು ಇವೆಲ್ಲಾ ನಾಜೂಕಾಗಿ ಬಯಲಾಟದ ರಂಗತಂತ್ರಗಳನ್ನು ಬಿಡದೇ ಮಾಡಿಸಿದ್ದು ಆ ಪ್ರಸಂಗ "ಪಾಸ್" ಕೊನೆಗೆ ರಾಜಸೂಯದ ಯಾಗಶಾಲೆಯನ್ನು ಭೀಮ ಹೊಗುವಾಗ ಹೊಸ್ತಿಲಿಂದಾಚೆಗೆ ಎಳೆಯುವ ಪುರುಷಾಮೃಗದ ದೃಶ್ಯ ಶ್ರೀಕೃಷ್ಣ, ಧರ್ಮರಾಯ, ಅರ್ಜುನ ಇವರೆಲ್ಲಾ ಪುರುಷಾಮೃಗದಿಂದ ಭೀಮನನ್ನು ಕಾಪಾಡುವ ದೃಶ್ಯವೂ ಅಚ್ಚಳಿಯದಂತೆ ಮೂಡಿತು. ನಾನು ಅಂಡಾಲರನ್ನು ಮೆಚ್ಚಿದ್ದು ಅವರು ಪ್ರಸಂಗವನ್ನು ಮುನ್ನಡೆಸುವ ರೀತಿಗೆ, ಎಲ್ಲಿಯೂ ತನ್ನ ಭಾಗವತಿಕೆಯೇ ವಿಜ್ರಂಭಿಸಬೇಕೆಂದು ಎಳೆದಾಡದೆ ಕ್ರಮಪ್ರಕಾರವಾಗಿ ಹಾಡಿದ್ರು. ಏರುಪದ್ಯ ಸೌಮ್ಯಪದ್ಯ ಎನ್ನುವ ಭೇದ ಮಾಡದೆ ಎಲ್ಲದಕ್ಕೂ ಸಮಾನ ಪ್ರಾಶಸ್ತ್ಯ ಕೊಟ್ಟು, ವೇಷಧಾರಿಗಳನ್ನೂ ನಿರ್ದೇಶಿಸಿ ಪ್ರಸಂಗ ಯಶಸ್ವಿಯಾಗುವಂತೆ ಮಾಡಿದ್ರು. ಬೇಕಾದ ಪದ್ಯ ಕ್ರಮ ಎಲ್ಲವನ್ನೂ ಬಿಡದೆ, ಉದಾಸೀನ ಮಾಡದೆ ಪ್ರಸಂಗವನ್ನು ಮುನ್ನಡೆಸುವ ಜಾಣ್ಮೆ ಅಂಡಾಲರದ್ದು.

ಕಟೀಲಿಗೆ ಹೋಗಿ ಎರಡು ಮೇಳಗಳ ಆಟವಿದ್ದರೂ ನಾನು ನೋಡಿದ್ದು ಒಂದು ಕಡೆಯ ಆಟ ಮಾತ್ರ ಆದರೆ ಆ ಬಗ್ಗೆ ಯಾವುದೇ ಬೇಸರವಿಲ್ಲ, ಪೂಂಜರ ಪದದ ಲಾಲಿತ್ಯ, ಮುರಳಿಯವರ ಚೆಂಡೆಯ ಝೇಂಕಾರ, ಅಂಡಾಲರ ಪ್ರಸಂಗ ನಡೆ, ಆಳ್ವರ ಸಂಗೀತಲಹರಿ, ಗಣೇಶ್ ಬೆಳ್ಳಾರೆ, ಕಾರಂತರು, ಆಚಾರ್ಯರು ಹೀಗೆ ಹಿಮ್ಮೇಳದ ಎಲ್ಲಾ ಕಲಾವಿದರೂ ಪ್ರೇಕ್ಷಕರ ಸಂಖ್ಯೆ ಕಡಿಮೆಯಿದ್ದರೂ ಏನೂ ಬೇಸರವಿಲ್ಲದೇ ಕೆಲಸ ಮಾಡಿದ್ದಾರೆ. ಮುಮ್ಮೇಳದ ಕಲಾವಿದರ ಕಾಣಿಕೆಯೂ ಸಮಪಾಲಿದೆ, ಎಲ್ಲರ ದುಡಿಮೆಯಿಂದಾಗಿ ನನ್ನಂತಹ ಸಾಮಾನ್ಯಪ್ರೇಕ್ಷಕನಿಗೆ ಉತ್ತಮ ಬಯಲಾಟವೊಂದನ್ನು ಸವಿಯುವ ಯೋಗ ದೊರಕಿತು.

ಯಕ್ಷಗಾನಂ ಗೆಲ್ಗೆ...

#yakshagana #kateelumela #andala